ನೆತ್ತಿಚರ್ಮ -
	ಮಿದುಳು ಚಿಪ್ಪಿನ ಮೇಲ್ಭಾಗದ ಮೃದುಕವಚ (ಸ್ಕ್ಯಾಲ್ಪ್). ಹೊರಗಿನಿಂದ ಒಳಕ್ಕೆ ಸರಿದಂತೆ ಅನುಕ್ರಮವಾಗಿ ಚರ್ಮ, ಕೊಬ್ಬು, ಸ್ನಾಯುಯುಕ್ತ ಬಂಧನಾಂಗಾಂಶದ ಹಾಳೆ, ಸಡಿಲನಾರು ಪದರ ಹಾಗೂ ಅಸ್ಥಿವೇಷ್ಟನೆ-ಈ ಐದು ಪದರಗಳು. ಆದರೂ ತೆಳುವಾಗಿಯೇ (ಸುಮಾರು 5 ಮಿಮೀ. ದಪ್ಪ) ಇರುವುದರಿಂದ ಇದು ಬುರುಡೆಯ ಆಕಾರಕ್ಕೆ ಹೊಂದಿಕೊಂಡಿದೆ. ಇದರ ಮೂಲಕ ತಲೆಬುರುಡೆಯ ಮೂಳೆಗಳ ಮೇಲ್ಮೈಗಳನ್ನು ಮುಟ್ಟಿನೋಡಲು ಸಾಧ್ಯ. ಹೊರಗಿನ ಮೂರು ಪದರಗಳೂ ಒಂದಕ್ಕೊಂದು ಬಿಡಿಸಲಾರದಂತೆ ಅಂಟಿಕೊಂಡಿವೆ. ಐದನೆಯ ಪದರ ಬುರುಡೆಯ ಮೂಳೆಗಳಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದು ಹೊರಗಿನ ಮೂರು ಪದರಗಳನ್ನೂ ಇದರ ಮೇಲೆ ಹಿಂದು ಮುಂದು ಮತ್ತು ಪಕ್ಕಗಳಿಗೆ ಸರಿಸುವಂತಿದೆ. ನಾಲ್ಕನೆಯ ಪದರ ಬಲು ತೆಳು ಮತ್ತು ಸಡಿಲವಾಗಿ ಇರುವುದರಿಂದ ಇದು ಸಾಧ್ಯ. ಮುಂದೆ ಕಣ್ಣುಗೂಡುಗಳ ಮೇಲಂಚುಗಳು, ಹಿಂದೆ ಹಿಂತಲೆಯ ಮೂಳೆಭಾಗದ ಕೆಳಅಂಚು, ಪ್ರತಿಪಕ್ಕದಲ್ಲಿ ಕಣತಲಸ್ನಾಯು ಅಂಚಿನಲ್ಲಿರುವ ಕಾಲರೇಖೆ (ಟೆಂಪೊರಲ್ ಲೈನ್) ಇವು ನೆತ್ತಿಚರ್ಮದ ಎಲ್ಲೆಗಳು.

	ಹೊರಪದರವಾದ ತ್ವಚೆ ಒಡಲಿನ ಇತರ ಎಡೆಗಳ ಚರ್ಮಕ್ಕಿಂತ ದಪ್ಪಕ್ಕಿಂತ ದಪ್ಪವಾಗಿದೆ. ಇದರಲ್ಲಿ ದೊಡ್ಡ ರೋಮಕೂಪಗಳೂ ಹೆಚ್ಚು ಹತ್ತಿರಹತ್ತಿರವಿದ್ದು ಎರಡನೆಯ ಪೇಶಿ ಪದರದೊಳಕ್ಕೂ ಚಾಚುತ್ತವೆ. ಇವುಗಳೊಡನೆ ಒಂದನೆಯ ಮತ್ತು ಮೂರನೆಯ ಪದರಗಳನ್ನು ಬಂಧಿಸುವ ತಂತುಗಳು ಇರುವುದರಿಂದ ಎರಡನೆಯ ಪದರದಲ್ಲಿರುವ ಕೊಬ್ಬು ಮಣಿಗಳಾಗಿ ಒಡೆದಂತಿದೆ. ಹಣೆಯ ಕೂದಲು ಬಲು ಸೂಕ್ಷ್ಮ. ಮಿಕ್ಕ ನೆತ್ತಿಚರ್ಮದ ಕೂದಲು (ತಲೆಕೂದಲು) ದೇಹದ ಇತರ ಭಾಗಗಳ ರೋಮಗಳಿಗಿಂತ ಹೆಚ್ಚು ಉದ್ದ. ನೆತ್ತಿಚರ್ಮದಲ್ಲಿ ಸುಮಾರು 10,000 ರೋಮಕೂಪಗಳುಂಟು. ಮೂರನೆಯ ಪದರದ ಹಿಂಭಾಗ ಮತ್ತು ಮುಂಭಾಗಗಳಲ್ಲಿ ಆಕ್ಸಿಪಿಟೊ ಫ್ರಾಂಟಾಲಿಸ್ (ಎಪಿಕ್ರೇನಿಯಸ್) ಎಂಬ ತೆಳುಸ್ನಾಯು ಇದೆ. ಇದರ ಸಂಕೋಚನದಿಂದ ಹುಬ್ಬುಗಳು ಮೇಲಕ್ಕೆ ಹೋಗಿ ವಿಸ್ಮಯ ಭಾವ ಮುಖದ ಮೇಲೆ ಮೂಡುತ್ತದೆ. ನಾಲ್ಕನೆಯ ಪದರ ಸಡಿಲವಾಗಿರುವುದರಿಂದ ತಲೆಗೆ ಮೂಗೇಟು ಬಿದ್ದು ಒಳಗಡೆಗೆ ರಕ್ತಸ್ರಾವವಾದರೆ ಆಗ ರಕ್ತ ಈ ಪದರದಲ್ಲಿ ಸಂಗೃಹೀತವಾಗಿ ನೆತ್ತಿ ಚರ್ಮ ಎಲ್ಲೆಯವರೆಗೂ ಬಾತುಕೊಳ್ಳುತ್ತದೆ. ನಾಲ್ಕನೆಯ ಪದರದಲ್ಲಿ ಕೀವು ತುಂಬಿಕೊಂಡರೂ ಹೀಗಾಗುತ್ತದೆ. ಐದನೆಯ ಪದರ ವಾಸ್ತವವಾಗಿ ಬುರುಡೆಮೂಳೆಗಳ ಹೊರಕವಚ. ಇದರ ಕೆಳಗೆ ಗಂತಿ ಬೆಳೆದರೆ ಅಥವಾ ಕೀವು ತುಂಬಿದರೆ ಊತ ಆಯಾ ಮೂಳೆಯ ಆಕಾರವನ್ನು ಪಡೆಯುತ್ತದೆ.

	ನೆತ್ತಿಚರ್ಮದ ನರ ಮತ್ತು ರಕ್ತನಾಳಗಳು ಎರಡನೆಯ ಪದರದ ಹಾಗೂ ಕೊಬ್ಬು ಪದರದ ಆಶ್ರಯದಲ್ಲಿದೆ. ಪ್ರತಿಯೊಂದು ಪಕ್ಕದಲ್ಲಿ ಐದು ಅಪಧಮನಿಗಳೂ ಹತ್ತು ನರಗಳೂ ಉಂಟು. ಕಿವಿಯ ಮುಂದೆ ಮೂರು ಅಪಧಮನಿ ಐದು ನರಗಳೂ ಇವೆ. ಮುಂದಿನ ಐದು ನರಗಳ ಪೈಕಿ ನಾಲ್ಕು ಇಂದ್ರಿಯ ನರಗಳು. ಇವು ತ್ರಿವಳಿ ನರದ ಶಾಖೆಗಳು. ಇನ್ನೊಂದು ಸ್ನಾಯುನರ. ಇದು ಮುಖನರದ ಶಾಖೆ. ಹಿಂದಿನ ಐದು ನರಗಳ ಪೈಕಿ ಕೂಡ ನಾಲ್ಕು ಇಂದ್ರಿಯ ನರಗಳು. ಇವು ಮೇಲಿನ ಮೂರು ಬೆನ್ನುಹುರಿ ನರಗಳ ಶಾಖೆಗಳು. ಐದನೆಯದು ಸ್ನಾಯುನರ. ಇದು ಕೂಡ ಮುಖನರದ ಶಾಖೆ. ಹೀಗೆ ಮುಖನರದ ಎರಡು ಶಾಖೆಗಳಲ್ಲಿ ಉದ್ದೀಪನೆಗಳು ಮಿದುಳಿನಿಂದ ಹರಿದಾಗ ಹುಬ್ಬೇರಿಸುವ ಸ್ನಾಯುಗಳು ಸೆಟೆಯುತ್ತವೆ. ಅಪಧಮನಿಗಳು ನೆತ್ತಿ ಚರ್ಮ ಚಲಿಸಿದಾಗ ಮಡಚಿಕೊಳ್ಳದ ರೀತಿಯಲ್ಲಿ ಡೊಂಕುಡೊಂಕಾಗಿ ಇದೆ.

	ನೆತ್ತಿಚರ್ಮದ ಅಭಿಧಮನಿಗಳು ಇತರ ಎಡೆಗಳಲ್ಲಿನಂತೆ ಅಪಧಮನಿಗಳ ಒಡನೆ ಇದ್ದರೂ, ಡೊಂಕುಡೊಂಕಾಗಿರದೆ ನೆಟ್ಟಗಿವೆ ಮತ್ತು ಸ್ವಲ್ಪ ಆಳದಲ್ಲಿದೆ. ಕಿವಿ ಮುಂದಿನ ಮೂರು ಅಭಿಧಮನಿಗಳೂ ಮುಂಕತ್ತಿನ ಒಳಅಭಿಧಮನಿಯನ್ನು ಸೇರುತ್ತವೆ. ಹಿಂದಿನ ಎರಡು ಅಭಿಧಮನಿಗಳಲ್ಲಿ ಕಿವಿಯ ಹಿಂದಿನದು ಮುಂಕತ್ತಿನ ಅಭಿಧಮನಿಯನ್ನೂ ಅದಕ್ಕೂ ಹಿಂದಿನದು ಹಿಂಕತ್ತಿನ ಅಭಿಧಮನಿಗಳನ್ನೂ ಸೇರುತ್ತವೆ. ದುಗ್ಧನಾಳಗಳು ಅಭಿಧಮನಿಗಳನ್ನು ಅನುಸರಿಸುತ್ತವೆ. ಇವುಗಳಲ್ಲಿ ಮೂರು ಗುಂಪುಗಳನ್ನು ಗುರುತಿಸಬಹುದು. 

ಹಣೆಯ ನಾಟಕಗಳು ಕಿವಿ ಮುಂದಿನ ಗಂತಿಗಳನ್ನು ಸೇರುತ್ತವೆ, ಹಣೆಯ ಗಾಯದಿಂದ ದವಡೆ ಕೆಳಗಿನ ಗಂತಿಗಳೂ ಊದಿಕೊಳ್ಳಬಹುದು;

ಪಾಶ್ರ್ವನಾಳಗಳು ಕಿವಿಯ ಮುಂದೆ ಹಾಗೂ ಹಿಂದೆ ಇರುವ ಗಂತಿಗಳಲ್ಲಿ ಕೊನೆ ಆಗುತ್ತವೆ;
ಹಿಂತಲೆಯ ನಾಳಗಳು ಹೆಕ್ಕತ್ತಿನ ಗಂತಿಗಳನ್ನು ಸೇರುತ್ತವೆ; ಕೆಲವು ಮಾತ್ರ ಕೆಳಮುಂಕತ್ತಿನಲ್ಲಿರುವ ಗಂತಿಗಳಲ್ಲಿ ಅಂತ್ಯ ಆಗುತ್ತವೆ.

	ನೆತ್ತಿಚರ್ಮವನ್ನು ಚಲಿಸುವ ಸ್ನಾಯು ಮೂರನೆಯ ಪದರದಲ್ಲಿದೆ. ಮುಂದಿನ ಭಾಗಕ್ಕೆ ಫ್ರಾನ್‍ಟ್ಯಾಲಿಸ್ ಸ್ನಾಯು ಎಂದು ಹೆಸರು. ಹಿಂದಿನ ಭಾಗ ಅಕ್ಸಿಪಿಟ್ಯಾಲಿಸ್. ಇವುಗಳ ನಡುವೆ ಗ್ಯಾಲಿಯ ಅಪೊನ್ಯೂರೋಟಿಕ ಎಂಬ ಗಟ್ಟಿನಾರಿನ ತೆಳುಹಾಳೆ ಇದೆ. ಹಾಳೆ ವಿಸ್ತಾರವಾಗಿ ಇಲ್ಲವೇ ಚಿಕ್ಕದಾಗಿ ಇರಬಹುದು. ಸ್ನಾಯು ಭಾಗ ಹೆಚ್ಚಿದರೆ ಹಾಳೆಭಾಗ ಕಡಿಮೆ ಇರುವುದು ವ್ಯಕ್ತ. ನೆತ್ತಿಚರ್ಮದಲ್ಲಿ ಇಪ್ಪತ್ತು ಅಪಧಮನಿಗಳನ್ನು ಹೆಸರಿಸಲಾಗಿದೆ (ಹೆಸರಿಸದವು ಹಲವಿದೆ). ಇವು ಪರಿಧಿಯಲ್ಲಿ ಪ್ರವೇಶಿಸಿ ಮಧ್ಯರೇಖೆಯ ಕಡೆಗೆ ಹೋಗಿ ಅಲ್ಲಿ ಎಡಬಲ ಎರಡು ಪಕ್ಕಗಳ ಶಾಖೆಗಳೂ ಕೂಡಿಕೊಳ್ಳುತ್ತವೆ. ಇಂಥ ಸನ್ನಿವೇಶ ದೇಹದ ಇತರ ಕಡೆ ಅಸಾಮಾನ್ಯ. ಅಭಿಧಮನಿಗಳ ಭಿತ್ತಿ ಮೂರನೆಯ ಪದರದ ಗಟ್ಟಿನಾರು ಮಾಂಸಗಳಿಗೆ ಅಂಟಿಕೊಂಡಿರುವುದರಿಂದ ಗಾಯದ ಫಲವಾಗಿ ಅವು ತುಂಡಾದರೆ ಅವುಗಳ ಕೊನೆಗಳು ಸೆಟೆದು ಬೇರ್ಪಡುವುವು; ಅವುಗಳಿಗೆ ಸಂಕೋಚನವೂ ಸಾಧ್ಯವಾಗದು. ಹೀಗಾಗಿ ನೆತ್ತಿಚರ್ಮದ ಚಿಕ್ಕ ಗಾಯಗಳಿಂದಲೂ ರಕ್ತ ತಡೆ ಇಲ್ಲದೆ ಸೋರುತ್ತದೆ ಮತ್ತು ಹೆಚ್ಚು ಭಯವನ್ನು ಉಂಟುಮಾಡುತ್ತದೆ. ಮೂಳೆ ಸೀಳಿದ್ದರೂ ಗಾಯದಿಂದಾಗಿ ಅದನ್ನು ಗುರುತಿಸುವುದು ಕಷ್ಟ. ತಲೆಗೆ ಮೂಗುಪೆಟ್ಟು ಬಿದ್ದಾಗಲೂ ಒಳಗೆ ಮೂಳೆ ಸೀಳಿರಬಹುದಾದ್ದರಿಂದ ಎಕ್ಸ್-ಕಿರಣ ಪರೀಕ್ಷೆ ಅಗತ್ಯವಾಗಬಹುದು. ಬುರುಡೆ ಮೂಳೆ ಸೀಳಿದ್ದರೆ ತಲೆನೋವು, ವಾಂತಿ ಅಥವಾ ಓಕರಿಕೆ ಮತ್ತು ಪ್ರಜ್ಞಾಹೀನತೆ ಇರಬಹುದು. ಮೂಗುಪೆಟ್ಟಿನಿಂದ ನಾಲ್ಕನೆಯ ಪದರದಲ್ಲಿ ರಕ್ತಸ್ರಾವವಾಗಬಹುದು.

	ತಲೆಗೆ ರಕ್ತಸರಬರಾಜು ಯಥೇಚ್ಛವಾಗಿರುವುದರಿಂದ ನೆತ್ತಿಚರ್ಮದ ಗಾಯಗಳು ಬೇಗ ಮಾಗುತ್ತವೆ. ಅನೇಕ ಅಪಧಮನಿಗಳ ಶಾಖೆಗಳು ಮೂಳೆಗಳನ್ನು ಪ್ರವೇಶಿಸುತ್ತವೆ. ಮೂಳೆಗಳ ಭಾಗಗಳನ್ನು ಸರಪಣಿ ಗರಗಸದಿಂದ ಸ್ನಾಯುಬಂಧಗಳೊಡನೆ ಬೇರ್ಪಡಿಸಿ ಬುರುಡೆಯ ಒಳಗೆ ಶಸ್ತ್ರವೈದ್ಯವಾದ ಮೇಲೆ ಮೂಳೆಗಳನ್ನು ಸ್ವಸ್ಥಾನಗಳಲ್ಲಿ ಜೋಡಿಸಿ ಚರ್ಮ ಹೊಲಿದ ಬಳಿಕವೂ ಮೂಳೆಗಳೂ ಸಾಯದೆ ಬದುಕಿರುವುದು ಇಂಥ ರಕ್ತಪೂರೈಕೆಯಿಂದ ಮಾತ್ರ ಸಾಧ್ಯವಾಗಿದೆ.

	ನೆತ್ತಿಚರ್ಮದ ಅಭಿಧಮನಿಗಳು ಬುರುಡೆ ಅಭಿಧಮನಿಗಳೊಂದಿಗೆ ಸಂಬಂಧಿತವಾಗಿರುವುದರಿಂದ ಕುರು ಅಥವಾ ಹೊರಗಾಯಗಳಿಂದ ಕ್ರಿಮಿಗಳು ಬುರುಡೆ ಒಳಕ್ಕೆ ನುಗ್ಗಿ ಮಿದುಳಿಗೆ ಅಪಾಯ ಹಾಗೂ ಪ್ರಾಣಹಾನಿ ಆಗಬಹುದು. ಈ ಕಾರಣದಿಂದ ನೆತ್ತಿಚರ್ಮವನ್ನು ಅಪಾಯಪ್ರದೇಶ ಎನ್ನುತ್ತಾರೆ. ನೆತ್ತಿಚರ್ಮದಲ್ಲಿ ದೊಡ್ಡ ರೋಮಕೂಪಗಳು ಹೆಚ್ಚು ಸಂಖ್ಯೆಯಲ್ಲಿವೆ. ಅವುಗಳಲ್ಲಿ ಮೇದೋಗ್ರಂಥಿಗಳು ಹೆಚ್ಚಿರುವುದರಿಂದ ಅಲ್ಲಿ ಮೇದಸ್ಸು ಕೂಡಿಕೊಂಡು ಅರ್ಧಗೋಳ ಗಂಟುಗಳಾಗುವ ಸಂಭಾವ್ಯತೆಗಳು ದೇಹದ ಇತರ ಭಾಗಗಳಲ್ಲಿ ಇರುವುದಕ್ಕಿಂತ ಹೆಚ್ಚು. ನಾಲ್ಕನೆಯ ಪದರ ದುಗ್ಧ ಕುಳಿ. ಇದು ಬಲು ಅಳ್ಳಕವಾಗಿದೆ. ಇದರಲ್ಲಿ ಅನೇಕ ದುಗ್ಧರಸನಾಳಗಳಿವೆ. ನರಗಳಿಲ್ಲ. ಹೀಗಾಗಿ ಇಲ್ಲಿ ದ್ರವ ಕೂಡಿದಾಗ ನೋವಾಗುವುದಿಲ್ಲ. ಬುರುಡೆಯ ಚಪ್ಪಟೆ ಮೂಳೆಗಳ ನೀವನಿಗಳು (ಸಂಧಿ) ಮಧ್ಯ ವಯಸ್ಸಿಗೆ ಕೂಡುತ್ತವೆ. ಆ ತನಕ ಅಸ್ಥಿವೇಷ್ಟನ ಮಿದುಳಿನ ಪೊರೆಯೊಡನೆ ಕೂಡಿರುವುದರಿಂದ ವೇಷ್ಟನದ ಕೆಳಗೆ ಕೀವು ಕೂಡಿದಾಗ ಊತ ಮೂಳೆಯ ಆಕಾರವನ್ನು ಹೊಂದುತ್ತದೆ; ಹಾಗೂ ಸೀವನಿಗಳ ಮೂಲಕ ಕೀವು ಮಿದುಳು ಪೊರೆಗಳನ್ನು ಸೇರಿ ಪ್ರಾಣಾಪಾಯವಾಗಬಹುದು.
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ